ಕಲಬುರ್ಗಿ ನಗರದಲ್ಲಿ ವಾರ್ಡ್ ಸಮಿತಿ ರಚನೆಗೆ ಶ್ರಮಿಸಲು ನಾಗರಿಕ ವೇದಿಕೆ ಸಂಕಲ್ಪ

Bala Janaagraha IconMarch 28, 2022
Blog

ದಿ. 12/3/2022 ರಂದು ಕಲಬುರಗಿಯ ಶಕ್ತಿನಗರದಲ್ಲಿ, ಕಲಬುರಗಿ ಸ್ಮಾರ್ಟ್ ಸಿಟಿ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಡ್ ಸಮಿತಿಗಳ ಅನುಷ್ಠಾನ ಮತ್ತು ಜನರಿಗೆ ಅವುಗಳ ಪ್ರಯೋಜನಗಳ ಕುರಿತು ನಗರದ ವಿವಿಧ ವಾರ್ಡ್‌ಗಳ ನಿವಾಸಿಗಳ ನಡುವೆ ಸಮಾಲೋಚನೆ ನಡೆಯಿತು.
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ, 1976 ರಲ್ಲಿನ ವಾರ್ಡ್ ಸಮಿತಿಗಳ ನಿಬಂಧನೆಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಲು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಅಂಡ್ ಡೆಮಾಕ್ರಸಿ ಸಂಸ್ಥೆಯ ನಾಗರೀಕ ಸಹಭಾಗಿತ್ವ ಕಾರ್ಯಕ್ರಮದ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಶ್ರೀ ಸಂತೋಷ ನರಗುಂದ ಅವರು ಆಗಮಿಸಿದ್ದರು. ಕ್ಲಬ್ ನ ಅಧ್ಯಕ್ಷ ಶ್ರೀ ಪ್ರಭು ಮಹಾಗಾಂವಕರ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು.

ಶ್ರೀ ಸಂತೋಷ ಅವರು ವಾರ್ಡ್ ಸಮಿತಿಗಳ ರಚನೆ, 74 ನೇ ಸಂವಿಧಾನದ ತಿದ್ದುಪಡಿಯ ಮೂಲ, ಬೆಂಗಳೂರಿನ ವಾರ್ಡ್ ಸಮಿತಿಗಳ ಯಶಸ್ಸಿನ ಗುಟ್ಟುಗಳು ಮತ್ತು ಮಂಗಳೂರು ಮಹಾನಗರ ಪಾಲಿಕೆಯಲ್ಲಿನ ವಾರ್ಡ ಸಮಿತಿ ಕುರಿತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಹಂಚಿಕೊಂಡರು. ಪ್ರತಿ ವಾರ್ಡ ಸಮಿತಿಯು ಹನ್ನೆರಡು ಸದಸ್ಯರನ್ನು ಒಳಗೊಂಡಿರುತ್ತದೆ, ಆಯಾ ವಾರ್ಡಿನ ಕಾರ್ಪೊರೇಟರ್ ವಾರ್ಡ ಸಮಿತಿ ಅಧ್ಯಕ್ಷರು ಆಗಿರುತ್ತಾರೆ. ಪ್ರತಿಯೊಂದು ಸಮಿತಿಗೆ ಪಾಲಿಕೆಯಿಂದ ಒಬ್ಬ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುತ್ತದೆ. ಉಳಿದ ಹತ್ತು ಸದಸ್ಯರಲ್ಲಿ ಮೂವರು ಮಹಿಳೆಯರು, ಇಬ್ಬರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವರ್ಗದವರು, ಇಬ್ಬರು ರಹವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಮತ್ತು ಉಳಿದ ಮೂವರು ಸಾಮಾನ್ಯ ವರ್ಗದ ಜನರು ಇರುತ್ತಾರೆ. ಅದ್ದರಿಂದ, ಸಮಿತಿಯು ಸಮಾಜದ ಎಲ್ಲಾ ವರ್ಗಗಳಿಂದ ಪ್ರಾತಿನಿಧ್ಯವನ್ನು ಹೊಂದಿರುತ್ತದೆ ಮತ್ತು ಎಲ್ಲರೂ ಒಗ್ಗೂಡಿ ಒಂದು ಉತ್ತಮ ವಾರ್ಡ್ ನಿರ್ಮಿಸಬಹುದು, ಎಂದು ಹೇಳಿದರು.

ತಮ್ಮ ನೆರೆಹೊರೆಗಳಿಗೆ ಸಮಗ್ರ ವಾರ್ಡ್ ಅಭಿವೃದ್ಧಿ ಕ್ರಿಯಾ ಯೋಜನೆಯನ್ನು ರೂಪಿಸಲು ವಾರ್ಡ್ ಸಮಿತಿಗಳು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ, ಇದು ಅವರ ಪ್ರದೇಶಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಹಾಗು ವಾರ್ಡ್ ಸಮಿತಿಗಳು ಪೊಲೀಸ್, ಜಲಮಂಡಳಿ ಅಧಿಕಾರಿಗಳು ಮತ್ತು ಜೆಸ್ಕಾಂ ಅಧಿಕಾರಿಗಳಂತಹ ವಿವಿಧ ಸರ್ಕಾರಿ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸುವ ವೇದಿಕೆಯಾಗಿದೆ. ಇದರಿಂದಾಗಿ ನೆರೆಹೊರೆಯಲ್ಲಿ ಉಂಟಾಗುವ ಎಲ್ಲಾ ತೊಂದರೆಗಳನ್ನು ಕಡಿಮೆ ಸಮಯದಲ್ಲಿ, ಅಹವಾಲುಗಳನ್ನು ಚರ್ಚಿಸಿ ವ್ಯವಸ್ಥಿತವಾಗಿ ಬಗೆಹರಿಸಬಹುದು ಎಂದು ಶ್ರೀ ಸಂತೋಷ ಅವರು ವಿವರಿಸಿದರು.

ಕಲಬುರಗಿ ವಾರ್ಡ್ ಸಮಿತಿಗಳ ವೇದಿಕೆಯ ನಗರ ಮಟ್ಟದ ಸಮನ್ವಯ ತಂಡದ ಸಂಚಾಲಕರಾಗಿ ಶ್ರೀಮತಿ ನಳಿನಿ ಮಹಾಗಾಂವಕರ ಅವರನ್ನು ಸಭೆಯಲ್ಲಿ ಒಮ್ಮತದಿಂದ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ನಳಿನಿ ಅವರು “ಕಲಬುರ್ಗಿಯ ವಾರ್ಡ್ ಸಮಿತಿಗಳಿಗೆ ಸೇರಲು ನಾಗರಿಕರು ಉತ್ಸುಕರಾಗಿದ್ದಾರೆ, ಮುಂದಿನ ದಿನಗಳಲ್ಲಿ ವೇದಿಕೆಯ ಮುಖಂಡರು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಮಾಹಿತಿ ಹಂಚಿಕೊಳ್ಳುವ ಮೂಲಕ ಆಸಕ್ತ ನಾಗರಿಕರ ಜಾಲವನ್ನು ನಿರ್ಮಿಸಿ, ಕಲಬುರಗಿ ಮಹಾನಗರ ಪಾಲಿಕೆಯು ವಾರ್ಡ್ ಸಮಿತಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ವಾರ್ಡ್ ಸಮಿತಿಗಳಲ್ಲಿ ಸ್ಥಾನಗಳನ್ನು ತುಂಬಲು ಸಹಾಯ ಮಾಡುತ್ತಾರೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಸಂಜೀವಕುಮಾರ ಡೊಂಗರಗಾಂವ, ಮಾಜಿ ಕಾರ್ಪೊರೇಟರ್ ಕಟ್ಟಿ, ಗೀತಾ, ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ದು ಹಿರೇಮಠ, ಎಂ. ಎಂ. ಆಲನಕಾರ, ರಾಮು ಪವಾರ, ವೇದಮೋಹನ, ಚಿಗೋಣಿ, ಚಿಮಕೋಡ್, ಪನ್ಸಾಲೆ, ನಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜನಾಗ್ರಹದ ಬಗ್ಗೆ
ಜನಾಗ್ರಹ ಸಂಸ್ಥೆಯು ರಮೇಶ್ ರಾಮನಾಥನ್ ಮತ್ತು ಸ್ವಾತಿ ರಾಮನಾಥನ್ ರವರು 2001 ರಲ್ಲಿ ಸ್ಥಾಪಿಸಿದ ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, ಇದರ ಉದ್ದೇಶವು ಭಾರತದ ನಗರ ಮತ್ತು ಪಟ್ಟಣಗಳ ಜೀವನ ಮಟ್ಟದಲ್ಲಿ ಸುಧಾರಣೆಯನ್ನು ತರುವುದಾಗಿದೆ. ಜನಾಗ್ರಹ ಸಂಸ್ಥೆಯು ನಗರಾಡಳಿತ ವಿಭಾಗದಲ್ಲಿ ಆಡಳಿತಾತ್ಮಕ ಮತ್ತು ಶಾಸಕಾಂಗ ಸುಧಾರಣೆಯನ್ನು ತರಲು ಸರ್ಕಾರದ ಮಟ್ಟದಲ್ಲಿ ಶ್ರಮಿಸಿದೆ.
ಜನಾಗ್ರಹದ ಚಿಂತನೆಯು ಸಮಸ್ಯೆಯ ಬದಲಾಗಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವತ್ತ ಏಕಾಗ್ರತವಾಗಿದೆ. ಈ ಧ್ಯೇಯವನ್ನು ಪೂರೈಸಲು, ಜನಾಗ್ರಹ ಸಂಸ್ಥೆಯು ನಾಗರಿಕರೊಂದಿಗೆ ಸಂವಹಿಸಿ ನಗರ ವ್ಯವಸ್ಥೆ ಮತ್ತು ಸರ್ಕಾರಿ ಅಂಗಗಳಲ್ಲಿ ಬದಲಾವಣೆಯನ್ನು ತರಲು ಶ್ರಮಿಸುತ್ತದೆ. (ಇದನ್ನು ನಾವು ನಗರ ವ್ಯವಸ್ಥೆ ಎಂದು ಕರೆಯುತ್ತೇವೆ)

ಮೂಲಸೌಕರ್ಯ, ಸೇವೆಗಳು ಮತ್ತು ಪೌರತ್ವದ ಸುಧಾರಣೆಯಿಂದ ಜೇವನದ ಗುಣಮಟ್ಟದಲ್ಲಿ ನೇರವಾಗಿ ಬದಲಾವಣೆಯನ್ನು ತರಬಹುದು ಎಂಬುದು ಜನಾಗ್ರಹದ ದೃಢ ನಂಬಿಕೆ ಆಗಿದೆ. ಅದಕ್ಕಾಗಿಯೇ , ಈ ಸಂಸ್ಥೆಯು ಕಾನೂನು, ಕಾಯ್ದೆ, ಮತ್ತು ಹವಾಮಾನ ಬದಲಾವಣೆ, ಲಿಂಗ ಸಮಾನತೆ ಮತ್ತು ಸಾರ್ವಜನಿಕರ ಸುರಕ್ಷತೆ, ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಅರೋಗ್ಯದ ಮೇಲೆ ಕೆಲಸ ನಿರ್ವಹಿಸುವ ಅಂಗಗಳ ಜೊತೆಗೂಡಿ ಕಾರ್ಯ ನಿರ್ವಹಿಸುತ್ತದೆ. ಅದನ್ನು ನಾಗರೀಕ ಸಹಭಾಗಿತ್ವ, ಪಾಲಿಕೆಯ ಹಣಕಾಸು, ಯುವಕರಲ್ಲಿ 21ನೇ ಶತಮಾನಕ್ಕೆ ಅನುಗುಣವಾದ ಕೌಶಲ್ಯಗಳನ್ನು ವೃದ್ಧಿಸುವ ಮೂಲಕ ಮಾಡಲಾಗುತ್ತಿದೆ.

ನಗರದ ಮೂಲಸೌಕರ್ಯಗಳನ್ನು ಸಧೃಡಗೊಳಿಸುವ ಮೂಲಕ ನಗರ ವ್ಯವಸ್ಥೆಯನ್ನು ಸುಧಾರಿಸುವುದು ಜನಾಗ್ರಹ ಸಂಸ್ಥೆಯ ಆಶಯ.

Post A New Comment

Your email address will not be published.

Subscribe To Our Newsletter

Sign up for our newsletter to stay up to date with the latest in active citizenship and urban governance reforms in India’s cities and towns.